December 5, 2021

Vijayanews

#1 digital newspaper

ಹರಪನಹಳ್ಳಿ: ಕೊರೋನಾ ವಾರಿಯರ್ಸ್ಗೆ ಆಹಾರದ ಕಿಟ್ ವಿತರಣೆ

ಹರಪನಹಳ್ಳಿ: ಕೊರೋನಾ ವಾರಿಯರ್ಸ್ ಗೆ ಆಹಾರದ ಕಿಟ್ ವಿತರಣೆ
ಸಾಂಕ್ರಾಮಿಕ ರೋಗದ ಸಂಕಷ್ಟದಲ್ಲಿ ಮಾನವೀಯತೆಯ ನೆರವು ಶ್ಲಾಘನೀಯ: ಎಸಿ
ಹರಪನಹಳ್ಳಿ: ಕೊರೋನಾ ಸಾಂಕ್ರಾಮಿಕ ರೋಗದ ಸಂಕಷ್ಟದ ಸಂಕೋಲೆ ಒಳಗೆ ಬಂಧಿಯಾದ ಸಮುದಾಯಕ್ಕೆ, ಮಾನವೀಯ ನೆಲೆಗಟ್ಟಿನ ಹಿನ್ನೆಲೆಯಲ್ಲಿ ಉದಾರ ಮನಸ್ಸಿನ ದಾನಿಗಳು ಹಾಗೂ ಸಂಘ- ಸಂಸ್ಥೆಗಳು ನೆರವಿನ ಹಸ್ತ ಚಾಚುತ್ತಿರುವ ಕಾರ್ಯ ಶ್ಲಾಘನೀಯ ಎಂದು ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಪ್ರಶಂಸೆ ವ್ಯಕ್ತಪಡಿಸಿದರು.
ಬುಧವಾರ ಪಟ್ಟಣದ ನಗರಮನೋರಂಜನಾ ಕೇಂದ್ರದ ಸಹಯೋಗದಲ್ಲಿ ಕೋವಿಡ್- 19 ವೈರಸ್ ನಿರ್ಮೂಲನೆಗಾಗಿ ನಿರಂತರವಾಗಿ ತೊಡಗಿಸಿಕೊಂಡಿರುವ ಡಿ ಗ್ರೂಪ್ ನೌಕರರಿಗೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.
ದೇಶದ ಹಲವಡೆ ಕೋವಿಡ್ 2ನೇ ಅಲೆಯಿಂದ ಸಾಕಷ್ಟು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟದ ಸಂಕೋಲೆಯಲ್ಲಿ ಸಿಲುಕಿ ನರಳುತ್ತಿದ್ದ ಬಹುತೇಕ ಜನ, ತಾವು ಅನುಭವಿಸುತ್ತಿರುವ ನೋವನ್ನು, ಹಂಚಿಕೊಳ್ಳಲು ಹಿಂಜರಿಕೆಯಲ್ಲಿದ್ದಾರೆ. ಅಂತಹ ಅಸಹಾಯಕ ಕುಟುಂಬಗಳಿಗೆ ಸಂಘ- ಸಂಸ್ಥೆಗಳು ನೆರವು ನೀಡಲು ಮುಂದಾಗಿರುವುದು ಮಾನವೀಯಮೌಲ್ಯದ ಸಾಮಾಜಿಕ ವ್ಯವಸ್ಥೆಯ ಸಂಕೇತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮನೋರಂಜನಾ ಕೇಂದ್ರದ ಅಧ್ಯಕ್ಷ ಗಂಗಾಧರ ಗುರುಮಠ್ ಮಾತನಾಡಿ, ಕೊರೋನಾ ಸಾಂಕ್ರಾಮಿಕ ರೋಗ, ಇಡೀ ಸಾಮಾಜಿಕ ವ್ಯವಸ್ಥೆಯ ಮೇಲೆ ಬೇಗನೆ ಚೇತರಿಸಿಕೊಳ್ಳಲಾರದಷ್ಟು ದುಷ್ಪರಿಣಾಮ ಬೀರಿದೆ. ಈ ಸಂದಿಗ್ಧ ಸಂದರ್ಭದಲ್ಲಿ ಮನೋರಂಜನಾ ಕೇಂದ್ರ ತನ್ನ ಸಾಮಾಜಿಕ ಕಳಕಳಿಯ ಭಾಗವಾಗಿ ಇಂಥಹ ಅನೇಕ ಚಟುವಟಿಕೆಯಲ್ಲಿ ಕೈಜೋಡಿಸುತ್ತಲೇ ಬಂದಿದೆ. ಜೀವದ ಹಂಗು ತೊರೆದು, ರೋಗವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಸಿಬ್ಬಂದಿಗೆ ಅಳಿಲು ಸೇವೆ ನೀಡಲು ಮುಂದಾಗಿದೆ ಎಂದರು.
ಸಿಪಿಐ ನಾಗರಾಜ ಕಮ್ಮಾರ ಮಾತನಾಡಿ, ಕೊರೋನಾ ವೈರಸ್ ನಿರ್ಮೂಲನೆ ಮಾಡುವ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಕಂದಾಯ, ಪೊಲೀಸ್ ಹಾಗೂ ಪೌರಾಡಳಿತ ಸಿಬ್ಬಂದಿ ಸಮರ್ಪಣ ಮನೋಭಾವದಿಂದ ಕರ್ತವ್ಯ ಸಲ್ಲಿಸುವ ಮೂಲಕ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ ಎಂದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಶಿವಕುಮಾರ್, ಮನೋರಂಜನಾ ಕೇಂದ್ರದ ಕಾನಹಳ್ಳಿ ರುದ್ರಪ್ಪ, ಮುಖಂಡರಾದ ಎಂ. ರಾಜಶೇಖರ, ತಾಲ್ಲೂಕು ವೈದ್ಯಾಧಿಕಾರಿ ಪಿ.ಕೆ. ವೆಂಕಟೇಶ್, ಪಿಎಸ್ಐ ಪ್ರಕಾಶ್, ಐಗೋಳ ಚಿದಾನಂದ, ಶಶಿಧರ ಪೂಜಾರ, ದುರುಗಪ್ಪ, ಎಸ್. ಆರ್. ತಿಮ್ಮಪ್ಪ ಇತರರು ಇದ್ದರು.