September 21, 2021

Vijayanews

#1 digital newspaper

ಜಿ.ಪಂ., ತಾ.ಪಂ. ಮೀಸಲಾತಿ; ಒಬಿಸಿ ವರ್ಗದ ಕಡೆಗಣನೆ ಬಿಜೆಪಿ ಒಬಿಸಿ ಮೋರ್ಚಾ ಆಕ್ಷೇಪ; ಚುನಾವಣೆ ಬಹಿಷ್ಕಾರ ಬೆದರಿಕೆ

ಹೂವಿನಹಡಗಲಿ ಪಟ್ಟಣದಲ್ಲಿ ಸೋಮವಾರ ಜಿ.ಪಂ., ತಾ.ಪಂ. ಸದಸ್ಯ ಸ್ಥಾನದ ಮೀಸಲಾತಿಯಲ್ಲಿ ಹಿಂದುಳಿದ ವರ್ಗದ ಸಮುದಾಯವನ್ನು ಕಡೆಗಣಿಸಲಾಗಿದ್ದು, ಮೀಸಲಾತಿ ಪುನರ್ ಪರಿಶೀಲಿಸಿ, ಒಬಿಸಿ ವರ್ಗಕ್ಕೆ ಮೀಸಲು ಕಲ್ಪಿಸುವಂತೆ ಒತ್ತಾಯಿಸಿ ಬಿಜೆಪಿ ಒಬಿಸಿ ಮೊರ್ಚಾದ ಪದಾಧಿಕಾರಿಗಳು ತಹಶೀಲ್ದಾರ್ ಅವರಿಗೆ ಆಕ್ಷೇಪಣೆ ಸಲ್ಲಿಸಿದರು.

ಜಿ.ಪಂ., ತಾ.ಪಂ. ಮೀಸಲಾತಿ; ಒಬಿಸಿ ವರ್ಗದ ಕಡೆಗಣನೆ
ಬಿಜೆಪಿ ಒಬಿಸಿ ಮೋರ್ಚಾ ಆಕ್ಷೇಪ; ಚುನಾವಣೆ ಬಹಿಷ್ಕಾರ ಬೆದರಿಕೆ
ಹೂವಿನಹಡಗಲಿ: ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯ ಸ್ಥಾನಗಳ ಮೀಸಲಾತಿಯ ಕರಡು ಅಧಿಸೂಚನೆಯಲ್ಲಿ ಹಿಂದುಳಿದ ವರ್ಗವನ್ನು ರಾಜ್ಯ ಚುನಾವಣಾ ಆಯೋಗ ಸಂಪೂರ್ಣವಾಗಿ ಕಡೆಗಣಿಸುವ ಮೂಲಕ, ಹಿಂದುಳಿದ ಸಮುದಾಯಕ್ಕೆ ತೀವ್ರ ಅನ್ಯಾಯ ಎಸಗಿದೆ ಎಂದು ತಾಲ್ಲೂಕು ಬಿಜೆಪಿ ಹಿಂದುಳಿದ ಮೋರ್ಚಾ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸೋಮವಾರ ಆಕ್ಷೇಪಣೆ ಸಲ್ಲಿಸಿದೆ.
ಮೋರ್ಚಾದ ತಾಲ್ಲೂಕು ಘಟಕ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ತಾಲ್ಲೂಕು ಕಚೇರಿಗೆ ದೌಡಾಯಿಸಿ, ರಾಜ್ಯ ಚುನಾವಣಾ ಆಯೋಗದ ಕ್ರಮವನ್ನು ತೀವ್ರ ಖಂಡಿಸಿ, ಆಕ್ಷೇಪಣಾ ಪತ್ರವನ್ನು ತಹಶೀಲ್ದಾರ್ ಅವರ ಮುಖಾಂತರ ಸಲ್ಲಿಸಿದರು.
ಪಕ್ಷದ ಒಬಿಸಿ ಜಿಲ್ಲಾಘಟಕದ ಪ್ರಧಾನಕಾರ್ಯದರ್ಶಿ ಈ.ಟಿ.ಲಿಂಗರಾಜ್ ಮಾತನಾಡಿ, ತಾಲ್ಲೂಕಿನಲ್ಲಿ ಶೇ. 30- 35ರಷ್ಟು ಹಿಂದುಳಿದ ಸಮುದಾಯ ಇದೆ. ಆದರೆ, ಚುನಾವಣಾ ಆಯೋಗ ಜನಸಂಖ್ಯಾ ಆಧಾರದ ಮೇಲೆ ಮೀಸಲಾತಿ ನಿಗದಿಪಡಿಸುವಲ್ಲಿ ಅವೈಜ್ಞಾನಿಕ ನೀತಿಯನ್ನು ಅನುಸರಿಸುವ ಮೂಲಕ ಆರು ಜಿಲ್ಲಾ ಪಂಚಾಯ್ತಿಯಲ್ಲಿ ಒಂದು ಸ್ಥಾನವನ್ನು ಹಿಂದುಳಿದ ವರ್ಗಕ್ಕೆ ನಿಗದಿಪಡಿಸಿಲ್ಲ.ಜತೆಗೆ, ತಾಲ್ಲೂಕು ಪಂಚಾಯ್ತಿಯ ಹದಿನಾಲ್ಕು ಸದಸ್ಯ ಸ್ಥಾನಗಳಲ್ಲಿ ಕೇವಲ ಎರಡೇ ಸ್ಥಾನ ಮೀಸಲು ಹಂಚಿಕೆ ಮಾಡುವ ಮೂಲಕ ಹಿಂದುಳಿದ ವರ್ಗದ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಕೊಟ್ರೇಶನಾಯ್ಕ್ ಮಾತನಾಡಿ, ರಾಜ್ಯ ಚುನಾವಣಾ ಆಯೋಗ ಜಿ.ಪಂ. ಹಾಗೂ ತಾ.ಪಂ. ಸದಸ್ಯ ಸ್ಥಾನದ ಮೀಸಲಾತಿಯನ್ನು ಬೇಕಾಬಿಟ್ಟಿಯಾಗಿ ನಿಗದಿಪಡಿಸಿದೆ. ಹೀಗಾಗಿ, ಹಿಂದುಳಿದ ವರ್ಗದ ಸಮುದಾಯ ರಾಜಕೀಯವಾಗಿ ವಂಚನೆ ಒಳಗಾಗಿದೆ. ಈ ಕೂಡಲೇ ಜಿ.ಪಂ. ಸದಸ್ಯ ಸ್ಥಾನದ ಪೈಕಿ, ಕನಿಷ್ಠ 2ಸ್ಥಾನ ಹಾಗೂ ತಾ.ಪಂ. ಸದಸ್ಯ ಸ್ಥಾನಗಳ ಪೈಕಿ ಕನಿಷ್ಠ 6 ಸ್ಥಾನಗಳನ್ನು ಮರು ಹಂಚಿಕೆ ಮಾಡಿ, ಮೀಸಲಾತಿ ನಿಗದಿಪಡಿಸುವ ಮೂಲಕ ಸಾಮಾಜಿಕನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಚುನಾವಣೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮೋರ್ಚಾದ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ಟಿ. ನಾಗರಾಜ್, ಪುರಸಭಾ ಸದಸ್ಯ ಪರಶುರಾಮ ಕಲಾಲ್, ಶಾಂತಪ್ಪ, ವಿನೋದ್ ಜಾಡರ್, ರಾಜು, ರಮೇಶ್ ಇತರರು ಉಪಸ್ಥಿತರಿದ್ದರು.